ಎಡ

	ಪ್ರಾಚೀನ ಸ್ಕ್ಯಾಂಡಿನೇವಿಯದ ಪುರಾಣ, ಪುಣ್ಯಕಥೆ, ಪುರಾತನದ ಚರಿತ್ರೆ ಮತ್ತು ಕಾವ್ಯಲಕ್ಷಣಶಾಸ್ತ್ರಗಳನ್ನೊಳಗೊಂಡ ಎರಡು ಹಿರಿಯ ಗ್ರಂಥಗಳು. ಒಂದಕ್ಕೆ ಕಿರಿಯ ಅಥವಾ ಗದ್ಯ ಎಡ ಎಂದೂ ಇನ್ನೊಂದಕ್ಕೆ ಹಿರಿಯ ಅಥವಾ ಕಾವ್ಯ ಎಡ ಎಂದೂ ಹೆಸರು. ಇವು ಐಸ್ಲೆಂಡಿನಲ್ಲಿ ಸುಮಾರು 13ನೆಯ ಶತಮಾನದಲ್ಲಿ ರಚಿತವಾದುವೆಂದು ತಿಳಿದು ಬಂದಿದೆ.

	ಗದ್ಯ ಎಡ ಐಸ್ಲೆಂಡಿನ ಒಬ್ಬ ಮುಖ್ಯಸ್ಥ ಸ್ನೋರಿ ಸ್ಟ್ಯುಲ್ರ್ಯೂಸನ್‍ನ (1179-1241) ರಚನೆ. 14ನೆಯ ಶತಮಾನದ ಆದಿಯಲ್ಲಿ ದೊರೆತ ಇದರ ಹಸ್ತಪ್ರತಿಯನ್ನು ಸ್ವೀಡನ್ನಿನ ಉಪ್ಸಾಲ ವಿಶ್ವವಿದ್ಯಾನಿಲಯದ ಗ್ರಂಥಾಗಾರದಲ್ಲಿ ರಕ್ಷಿಸಿಟ್ಟಿದ್ದಾರೆ.

	ಪುರಾತನಕಥೆಗಳ ಸಂಗ್ರಹ ಎಂಬುದಕ್ಕಾಗಿ ಎಡ (ಐಸ್ಲೆಂಡ್ ಭಾಷೆಯಲ್ಲಿ ಮುತ್ತಜ್ಜಿ) ಎಂಬ ಹೆಸರು ಬಂದಿರಬಹುದು. ಗ್ರಂಥಕರ್ತ ಸ್ನೋರಿಯ ಊರಿನ ಹೆಸರು ಒಡ್ಡಿ ಎಂಬುದರಿಂದ ಎಡ ಬಂದಿರಲಿಕ್ಕೂ ಸಾಕು. ಆದರೆ ಹೆಚ್ಚು ಸಮಂಜಸವಾದ ವಿವರಣೆ ಇನ್ನೊಂದಿದೆ. ಊರ್ ಎಂಬ ಪದದಿಂದ ಎಡ ನಿಷ್ಪನ್ನವಾಗಿರಬೇಕು. ಈ ಮಾತಿಗೆ ಕಾವ್ಯ, ಕಾವ್ಯಮೀಮಾಂಸೆ ಎಂಬ ಅರ್ಥ ಇದೆ. ಮುಖ್ಯವಾಗಿ ಕಾವ್ಯ ಲಕ್ಷಣಶಾಸ್ತ್ರ ಎನ್ನಬಹುದಾದ ಈ ಗ್ರಂಥಕ್ಕೆ ಎಡ ಎಂಬ ಹೆಸರು ಉಚಿತವಾಗಿ ಕಾಣುತ್ತದೆ.

	ಗದ್ಯ ಎಡದಲ್ಲಿ ನಾಲ್ಕು ಭಾಗಗಳಿವೆ. ಮೊದಲ ಭಾಗದಲ್ಲಿ ಹಳೆಯ ನಾರ್ಸ್ ದೇವರುಗಳ ಪುರಾಣ ಕಥೆಗಳು, ಪುರಾತನ ಗ್ರೀಕ್ ವೀರರಾದಿಯಾಗಿ ಅನೇಕ ವೀರ ಪುರುಷರ ವೃತ್ತಾಂತಗಳು ಇವೆ. ನಾರ್ಸ್ ಕಾವ್ಯವನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಪೌರಾಣಿಕ ಹಿನ್ನಲೆಯಲ್ಲಿ ಕಾವ್ಯದ ವಸ್ತುವಿನ ಜಿe್ಞÁಸೆ ಎರಡನೆಯ ಭಾಗದಲ್ಲಿದೆ. ಮಧ್ಯಮಯುಗದ ಅನೇಕ ಉದ್ಗ್ರಂಥಗಳಲ್ಲಿರುವಂತೆಯೇ ಇಲ್ಲೂ ನಿರೂಪಣೆಯೆಲ್ಲ ಸಂಭಾಷಣಾರೂಪದಲ್ಲಿದೆ. ದೇವರುಗಳನ್ನು ಕುರಿತ ಪ್ರಾಚೀನ ಸ್ಕ್ಯಾಂಡಿನೇವಿಯ ಪದ್ಯಗಳೇ ಇಲ್ಲಿನ ಅನೇಕ ವಿಚಾರಗಳಿಗೆ ಆಧಾರ. ಮೂರನೆಯ ಭಾಗದಲ್ಲಿ ಕಾವ್ಯದ ಉಗಮದ ಕಥೆ ಮತ್ತು ಭಾಷೆಯನ್ನು ಕುರಿತ ಚರ್ಚೆ ಇದೆ. ಸ್ಕ್ಯಾಂಡಿನೇವಿಯ ಕಾವ್ಯಭಾಷೆಯ ವಿಶಿಷ್ಟಲಕ್ಷಣಗಳನ್ನೂ ಅಲಂಕಾರಗಳನ್ನೂ ವಿವರಿಸಲಾಗಿದೆ. ಈ ಭಾಷೆಯ ವಿಶಿಷ್ಟತೆ ರೂಪಕ ನುಡಿಗಟ್ಟುಗಳಲ್ಲಿ ಕಾಣುತ್ತದೆ. ಐಸ್ಲೆಂಡಿನ ಮತ್ತು ಪ್ರಾಚೀನ ಕಾವ್ಯದ ಇತಿಹಾಸದ ಬಗ್ಗೆ ಬೇಕಾದಷ್ಟು ವಿಷಯ ಇದರಿಂದ ತಿಳಿಯುತ್ತದೆ. ಅಲಂಕಾರಿಕ ಪದಗಳ ವಿವರಣೆಗೆ 9 ರಿಂದ 12ನೆಯ ಶತಮಾನದವರೆಗಿನ ಹಿರಿಯ ಕವಿಗಳ ಕಾವ್ಯಗಳಿಂದ ಉದಾಹರಣೆಗಳನ್ನು ಕೊಟ್ಟಿರುವುದರಿಂದ ಕೇವಲ ಶ್ರುತಿರೂಪದಲ್ಲಿದ್ದ ಅಮೂಲ್ಯ ಕಾವ್ಯಗಳ ಭಾಗಗಳು ಲಿಖಿತವಾಗಿ ದೊರೆಯುವಂತಾಗಿವೆ. ನಾಲ್ಕನೆಯ ಭಾಗದಲ್ಲಿ ವಿವಿಧ ಬಗೆಯ ಕವನಗಳ, ಛಂದೋ ರೂಪಗಳು, ಒಂದೊಂದರ ವಿಶಿಷ್ಟ ಲಕ್ಷಣಗಳ ವಿವರಣೆ ಬರುತ್ತದೆ. ಪ್ರಾಚೀನ ನಾರ್ಸ್ ಕಾವ್ಯಾಭ್ಯಾಸಿಗಳಿಗೆ ಇದೊಂದು ಅಮೂಲ್ಯ ಆಕರವಾಗಿದೆ. ಕಥನ ಕಲೆಯ ಉತ್ಕøಷ್ಟ ಮಾದರಿಗಳು ಈ ಗ್ರಂಥದಲ್ಲಿ ಸಿಗುತ್ತವಾದರೂ ಇಲ್ಲಿನ ಪುರಾಣ ವಿಷಯಗಳು ಅಷ್ಟು ಶುದ್ಧವಾಗಿಲ್ಲವೆಂದು ವಿದ್ವಾಂಸರ ಅಭಿಪ್ರಾಯ.

	11-12ನೆಯ ಶತಮಾನದ ಐಸ್ಲೆಂಡ್ ಇತಿಹಾಸಕಾರ ಸೀಗ್‍ಪ್ಯೂಸನ್ ಸಂಗ್ರಹಿಸಿ ಸಂಪಾದಿಸಿದ ಕೃತಿ ಎಂಬುದಕ್ಕಾಗಿ ಸೀಮುಂಡನ ಎಡ ಎಂದೂ ಕರೆಯುತ್ತಾರೆ. ಆದರೆ ಇದರ ಸಂಕಲನ ಅವನ ಕಾಲದಿಂದೀಚೆಗೆ ಆದದ್ದು. 13ನೆಯ ಶತಮಾನದ ದ್ವಿತೀಯಾರ್ಧದಲ್ಲಿ ಇದರ ಹಸ್ತಪ್ರತಿ ಸಿದ್ಧವಾಯಿತು. 17ನೆಯ ಶತಮಾನದಲ್ಲಿ ಐಸ್ಲೆಂಡಿನ ಬಿಷಪ್ ಬ್ರಿನ್ಯೋಲ್ಫ್ ಸ್ವೀನ್ಸನ್ನನ ಬಳಿ ಈ ಗ್ರಂಥ ದೊರೆಯಿತು. ಈಗ ಕೋಪನ್ ಹಾಗನ್ ರಾಯಲ್ ಗ್ರಂಥ ಭಂಡಾರದಲ್ಲಿ ಇದನ್ನು ರಕ್ಷಿಸಿಡಲಾಗಿದೆ. ಎರಡು ಗುಂಪುಗಳಾಗಿ ವಿಂಗಡಿಸಬಹುದಾದ ಇದರ ಪದ್ಯಗಳಲ್ಲಿ ಮೊದಲ ಗುಂಪು ಬೇರೆ ಬೇರೆ ಕಾಲಗಳಲ್ಲಿ ರಚಿತವಾದ ವಿವಿಧ ಛಂದೋರೂಪದ ಪದ್ಯಗಳನ್ನೊಳಗೊಂಡು ಪೌರಾಣಿಕ ಮತ್ತು ವೀರಯುಗದ ಕಾವ್ಯಸಂಗ್ರಹವಾಗಿದೆ. ಉತ್ತರದ ದೇವರುಗಳ ಕಥೆ, ಸೃಷ್ಟಿಯಾದಿಯಿಂದ ಜಗತ್ತಿನ ವಿಲಯದವರೆಗಿನ ವೃತ್ತಾಂಶ- ಇವು ಇಲ್ಲಿನ ಕವನಗಳ ವಸ್ತು. ನೈತಿಕ ಹಾಗೂ ಧಾರ್ಮಿಕ ನೀತಿ ನಿಯಮಗಳನ್ನು ಉಪದೇಶಿಸುತ್ತ ತನ್ನ ಅತುಲ ಮಹಿಮೆಯನ್ನೂ ಮಂತ್ರ ಶಕ್ತಿಯನ್ನೂ ಓಡಿನ್ ದೇವರು ಹೇಳುತ್ತಿರುವ ಹಾಗೆ ಕೆಲವು ಪದ್ಯಗಳಿವೆ. ಹೀಗೆಯೆ ಬೇರೆ ಬೇರೆ ದೇವರುಗಳ ತತ್ತ್ವೋಪದೇಶಗಳೂ ಮಹಿಮೆಗಳೂ ವರ್ಣಿತವಾಗಿವೆ.

	ಎರಡನೆಯ ಗುಂಪಿನಲ್ಲಿ ಜಮ್ರ್ಯಾನಿಕ್ ಜನಾಂಗದವರ ಹಲವು ವೀರಪುರುಷರ ಕಥೆಗಳಿವೆ.

	ಜಮ್ರ್ಯಾನಿಕ್ ಸಾಹಿತ್ಯವೃಕ್ಷದ ಬೇರೆ ಯಾವ ಶಾಖೆಯಲ್ಲೂ ಎಡಕ್ಕಿಂತ ಬೃಹತ್ತಾದ ಕಾವ್ಯ ಇನ್ನೊಂದಿಲ್ಲ.

(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ